24/04/2026
ಹಳೆಯ ಸ್ನೇಹಿತರೇ ಎನ್ನುವ ಭಾವವನ್ನು ಕೊಟ್ಟ ಹೊಸದಾಗಿ ಪರಿಚಿತ ಓದುಗರೊಬ್ಬರು (ಶ್ರೀ ಡಾ ತಿಮ್ಮರಾಜು) ಈ ರೀತಿ ಬರೆದಿದ್ದಾರೆ. ಇಂಥ ಅನಿರೀಕ್ಷಿತಗಳು ನಡೆದಾಗ ಧನ್ಯತೆಯೊಂದೇ ಮನಸ್ಸಿಗೆ ಬರುವ ಸಂವೇದನೆ. ನಮ್ಮನ್ನು ಸಂಪರ್ಕಿಸಿದ Sudha & Sandeep Manjunath ಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.
ಆತ್ಮೀಯ ವಸಂತಣ್ಣ,
ನಿಮ್ಮಿಂದ ಕಳುಹಿಸಲ್ಪಟ್ಟ ಪುಸ್ತಕವು ನಿನ್ನೆ ಮಧ್ಯಾಹ್ನ ನನ್ನ ಕೈಸೇರಿತು. ನಾನು ನಮ್ಮ ಆಸ್ಪತ್ರೆಯ ಸಿಬ್ಬಂದಿಯೊಡನೆ ಸಮೀಪದ ಊರೊಂದರಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅಂಚೆಯವರು ನಮ್ಮ ಆಸ್ಪತ್ರೆಯ ಬಳಿ ಹೋಗಿ ನನಗೆ ಕರೆಮಾಡಿದ್ದರು. ನಾನು ಸಮೀಪದ ಊರಿನಲ್ಲಿ ಇರುವುದನ್ನು ತಿಳಿದು ನಾನಿರುವಲ್ಲಿಗೇ ಬಂದು ಪುಸ್ತಕವನ್ನು ಕೊಟ್ಟರು. ಇಷ್ಟು ಚಿಕ್ಕ ವಿಷಯವನ್ನೂ ನಾನು ಏಕೆ ಪ್ರಸ್ತಾಪಿಸಿದೆ ಎಂದರೆ ನಾವು ಯಾವುದನ್ನಾದರೂ ಎಷ್ಟು ಶ್ರದ್ದೆಯಿಂದ ಎದುರುನೋಡುತ್ತೇವೆಯೋ ಅದು ಅಷ್ಟೇ ಘನತೆಯಿಂದ ನಮಗೆ ನೀಡಲ್ಪಡುವುದು ಎಂದು ನಾನು ನಂಬುತ್ತೇನೆ.
ಸಾಮಾನ್ಯವಾಗಿ ಆ ಅಂಚೆಯವರು ನನಗೆ ಬಂದ ಪತ್ರಗಳನ್ನೋ ಪುಸ್ತಕಗಳನ್ನೋ ನೀಡಿ ಹೊರಟುಹೋಗುತ್ತಿದ್ದರು. ನಿನ್ನೆ ಪುಸ್ತಕವನ್ನು ಕೊಟ್ಟು ನನ್ನೊಡನೆ ತುಂಬಾ ವಿಶ್ವಾಸದಿಂದ ಒಂದೆರಡು ನಿಮಿಷ ಮಾತಾಡಿ ಹೋದರು. ನಾನು ನಿಮ್ಮ ಈ ಪುಸ್ತಕಕ್ಕಾಗಿ ನೀವು ಇದನ್ನು ಬರೆಯುವುದಕ್ಕಿಂತ ಮುಂಚೆಯಿಂದ ಹಂಬಲಿಸಿದ್ದೇನೆ ಎಂದರೆ ನಿಮಗದು ತೀರಾ ಅತಿಶಯೋಕ್ತಿ ಎನಿಸಬಹುದು. ನನ್ನ ಮಟ್ಟಿಗಂತೂ ಅದೇ ಸತ್ಯ.
ಐದಾರು ವರ್ಷಗಳ ಹಿಂದೆ ನಾನು ನಿಮ್ಮ ಐಟಿಯಿಂದ ಮೇಟಿಗೆ ಪುಸ್ತಕವನ್ನು ಓದಿ ತುಂಬಾ ಪುಳಕಿತಗೊಂಡಿದ್ದೆ. ಬಯಸಿದ ಜೀವನವನ್ನು ಪಡೆಯಲು ಅದು ಪ್ರೇರಣಾದಾಯಕವಾಗಿತ್ತು. ಅದೇ ಸಮಯಕ್ಕೆ ನಾವು ಎಂಟು ಮುಕ್ಕಾಲು ಎಕರೆ ಜಮೀನನ್ನು ಕೊಂಡು ಕೃಷಿಯನ್ನು ಆರಂಭಿಸುವ ಹಂತದಲ್ಲಿದ್ದೆವು. (ಇದರ ವಿವರಗಳನ್ನು ಕುರಿತು ನಾನು ಬರೆದ ಒಂದು ಲೇಖನವನ್ನು ನಿಮಗೆ ಮೇಲೆ ಆಗಲೇ ಕಳಿಸಿದ್ದೇನೆ). ಆಗ ಕೃಷಿಯಲ್ಲಿ ನನ್ನ ಕುಟುಂಬದ ಬೆಂಬಲವನ್ನು ಹೆಚ್ಚು ಪಡೆಯಲು ಯತ್ನಿಸುತ್ತಿದ್ದೆ. ನಿಮ್ಮ ಆ ಪುಸ್ತಕದ ಓದಿನಿಂದ ನಾನಂತೂ ಒಂದಷ್ಟು ಪ್ರಾಥಮಿಕ ಅಡೆತಡೆಗಳನ್ನು ಎದುರಿಸಲು ನೈತಿಕ ಬೆಂಬಲವನ್ನು ಪಡೆದಿದ್ದೆ.
ನಿಮ್ಮ ಆ ಪುಸ್ತಕ ಈಗ ನನ್ನ ಬಳಿಯಿಲ್ಲ. ಹೋದಲೆಂದು ತೆಗೆದುಕೊಂಡು ಹೋದ ನನ್ನ ಸ್ನೇಹಿತರೊಬ್ಬರು ಆ ಪುಸ್ತಕವನ್ನು ಕಳೆದುಹಾಕಿದ್ದಾರೆ. ಮತ್ತೆ ಮತ್ತೆ ಓದಬೇಕೆನಿಸಿ, ಆ ಪುಸ್ತಕವನ್ನು ಪುಸ್ತಕದ ಅಂಗಡಿಗಳಲ್ಲಿ, ಇಂದ್ರಪ್ರಸ್ಥದಲ್ಲಿಯೂ, ವಿಚಾರಿಸಿದೆ. ಸಿಗಲಿಲ್ಲ. ಒಂದು ಬಾರಿಯಷ್ಟೇ ಅದನ್ನು ಓದಿರುವುದು. ಕೃಷಿಯನ್ನು ನೀವು ಏಕೆ ಆಯ್ಕೆಮಾಡಿಕೊಂಡಿರಿ ಎಂಬ ನಿಮ್ಮ ತಾತ್ವಿಕ ನಿಲುವುಗಳನ್ನು ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. ಹೆಚ್ಚೂಕಡಿಮೆ ಅವು ನನ್ನ ನಿಲುವುಗಳೂ ಕೂಡ.
ನಾನು ನಿಮ್ಮ ಪುಸ್ತಕಕ್ಕಾಗಿ ಹಂಬಲಿಸಿದ್ದೆ ಎಂಬುದನ್ನು ನಾನು ಈ ಪುಸ್ತಕದಲ್ಲಿನ ವಿಷಯಗಳಿಗಾಗಿ ಹಂಬಲಿಸಿದ್ದೆ ಎಂಬರ್ಥದಲ್ಲಿ ಹೇಳಿದ್ದು. ಪುಸ್ತಕದಲ್ಲಿನ ಬಹುತೇಕ ಎಲ್ಲಾ ಅಧ್ಯಾಯಗಳು ನನ್ನ ಹೃದಯಕ್ಕೆ ತೀರಾ ಹತ್ತಿರವಾಗಿವೆ. ಮೊದಲ ಅಧ್ಯಾಯವು ಕೃಷಿಯಲ್ಲಿ ಹೊಸದಾಗಿ ತೊಡಗಿಸಿಕೊಳ್ಳಬೇಕು ಎಂದು ಯೋಚಿಸುವವರಿಗೆ ಇರಬೇಕಾದ ವಾಸ್ತವಿಕ ಪ್ರಜ್ಞೆಯನ್ನು ತುಂಬ ವಸ್ತುನಿಷ್ಟವಾಗಿ ವಿವರಿಸುತ್ತದೆ. ನಾನು ಕೃಷಿಯಲ್ಲಿ ತೊಡಗಬೇಕು ಎಂಬುದು ನನ್ನ ವ್ಯಕ್ತಿತ್ವದ ಕೇಂದ್ರಬಿಂದುವಿನಲ್ಲಿ ನೆಲೆಗೊಂಡಿರುವುದರಿಂದ ವೈಯಕ್ತಿಕವಾಗಿ ನನಗದು ಅಷ್ಟು ಪ್ರಸ್ತುತವಲ್ಲ. ಖುಷಿಗಾಗಿ ಯಾವ ಬೆಲೆಯನ್ನಾದರೂ ತೆರುವಷ್ಟು ಕೃಷಿಯನ್ನು ನಾನು ಪ್ರೀತಿಸುತ್ತೇನೆ. ಆದರೂ ಪುಸ್ತಕದಲ್ಲಿನ ಈ ಅಧ್ಯಾಯದ ವಸ್ತು ಒಂದು ಆಪ್ತಸಲಹೆಯಾಗಿ ನನ್ನಮಟ್ಟಿಗೂ ಮೂಡಿಬಂದಿದೆ.
ಉಳಿದ ಅಧ್ಯಾಯಗಳಲ್ಲಿನ ಕೃಷಿಯ ಸಿಹಿಕಹಿಗಳ ಕುರಿತ ನಿಮ್ಮ ಬರವಣಿಗೆ ಚೇತೋಹಾರಿಯಾಗಿದೆ. ನಿಜವಾಗಿಯೂ ತುಂಬಾ ಆಪ್ತವಾಗಿ ಕೃಷಿಯಲ್ಲಿನ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದೀರಿ.
ಜಲಸಂರಕ್ಷಣೆ, ಹೋಮ್ ಸ್ಕೂಲಿಂಗ್, ಸಂಸ್ಕೃತ ಭಾಷೆ, ಅಗ್ರಿ ಟೂರಿಸಂ - ಇವಿಷ್ಟು ಈ ಪುಸ್ತಕದಲ್ಲಿ ನನ್ನ ಅತ್ಯಂತ ಆಸಕ್ತಿಯ ವಿಷಯಗಳು. ಈ ಎಲ್ಲಾ ವಿಷಯಗಳ ಕುರಿತು ನನ್ನ ಮನಸ್ಸು ಯಾವಾಗಲೂ ತುಡಿಯುತ್ತಿರುತ್ತದೆ. ಈ ಎಲ್ಲಾ ಅಧ್ಯಾಯಗಳನ್ನು ನನಗಾಗಿಯೇ ಬರೆದಂತಿದೆ (ಅಥವಾ ನಾನೇ ಬರೆದಂತಿದೆ!). ಬಯಲುಸೀಮೆಯವನಾಗಿ ಕೃಷಿಯಲ್ಲಿ ನೀರಿನ ಬಳಕೆಯನ್ನು ಕುರಿತು - ನೀರನ್ನು ಉಳಿಸುವುದು ಮತ್ತು ಕಡಿಮೆ ನೀರಿನಲ್ಲಿ ವ್ಯವಸಾಯವನ್ನು ಮಾಡುವುದು ಹೇಗೆ ಎಂದು - ಅತಿಯಾಗಿ ಯೋಚಿಸಿದ್ದೇನೆ. ಮಳೆಯಾಶ್ರಯದಲ್ಲಿ ಕೃಷಿಮಾಡಬೇಕು ಅಥವಾ ಸ್ವಾಭಾವಿಕ ಜಲಮೂಲಗಳಾದ ಕೆರೆ, ಕಟ್ಟೆ, ನದಿಗಳ ನೀರಿನಿಂದ ಕೃಷಿ ಮಾಡಬೇಕು ಎಂದು ನಾನು ಬಯಸುತ್ತೇನೆ. ಕೊಳವೆಬಾವಿಗಳನ್ನು ಕೊರೆಸಿ ಕೃಷಿ ಮಾಡುವುದು ನನಗೆ ಅಷ್ಟು ಸಮಾಧಾನವೆನಿಸುವುದಿಲ್ಲ. ಪ್ರಕೃತಿ ನಮ್ಮ ತಾಯಿ. ತಾಯಿಗೆ ತನ್ನ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಹೇಳಿಕೊಡಬೇಕೇ? ಆಕೆಗೆ ವಿರುದ್ಧವಾಗಿ ವರ್ತಿಸುವುದಕ್ಕಿಂತ ಆಕೆಯೊಡನೆ ಸೌಹಾರ್ದದಿಂದ ಬದುಕುವುದು ಶ್ರೇಯಸ್ಕರ ಎಂದು ನಂಬಿದ್ದೇನೆ. ಆದರೂ ನಮ್ಮ ಹೊಲದಲ್ಲಿ ಈಗ ಮೂರು ಕೊಳವೆಬಾವಿಗಳಿವೆ. ನಾವು ಜಮೀನನ್ನು ಕೊಳ್ಳುವ ಮುಂಚೆ ಇದ್ದ ಎರಡು ಹಾಗೂ ಕಳೆದ ಎರಡು ವರ್ಷಗಳ ಮುಂಚೆ ನಮ್ಮ ಕುಟುಂಬದವರು ಕೊರೆಸಿದ್ದು ಒಂದು. ಹೊಲದ ತುಂಬೆಲ್ಲ ಅಡಿಕೆಯಿದೆ. ನಾನು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲಾ ಹಣ್ಣಿನ ಗಿಡಗಳನ್ನು, ಕಾಡುಮರಗಳನ್ನು ನೆಟ್ಟಿದ್ದೇನೆ / ನೀಡುತ್ತಿದ್ದೇನೆ. ಮನೆಗಾಗುವಷ್ಟು ತರಕಾರಿಯನ್ನು ಬೆಳೆದುಕೊಳ್ಳುತ್ತಿದ್ದೇನೆ. ನೀರಿನ ಸಂರಕ್ಷಣೆಗಾಗಿ ಮಳೆನೀರುಕೊಯ್ಲು ಹಾಗೂ ಹಿಂಗುಗುಂಡಿಗಳ ಬಗ್ಗೆ ನಾನು ಈ ಮುಂಚೆ ಯೋಚಿಸಿದ್ದೆ. ನಿಮ್ಮ ಪುಸ್ತಕವನ್ನು ಓದಿದ ಮೇಲೆ ಇನ್ನಷ್ಟು ವಿಸ್ತಾರವಾಗಿ ಈ ಕುರಿತು ಯೋಚಿಸುತ್ತಿದ್ದೇನೆ. ಈ ಕುರಿತ ನನ್ನ ಪ್ರಯೋಗಗಳನ್ನು ಹಾಗೂ ಪ್ರಗತಿಯನ್ನು ಸಾಧ್ಯವಾದರೆ ಮುಂದೊಮ್ಮೆ ಬರೆಯುವೆ.
ಇನ್ನು ಹೋಮ್ ಸ್ಕೂಲಿಂಗಿನ ನಿಮ್ಮ ವಿಚಾರಗಳನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುವ ಮಗುವನ್ನು ನಂತರ ನಾವು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಶಿಕ್ಷಣವೆನ್ನುವುದು ಮತ್ತೆ ಆ ಮಗುವನ್ನು ವಿಶ್ವಮಾನವನನ್ನಾಗಿ ಮಾಡಬೇಕು ಎಂದು ಕುವೆಂಪುರವರು ಆಶಿಸುತ್ತಾರೆ. ಆದರೆ ನಮ್ಮ ಬಹುತೇಕ ಶಾಲೆಗಳಲ್ಲಿ ಸಿಗುವ ಔಪಚಾರಿಕ ಶಿಕ್ಷಣ ಈ ನಿಟ್ಟಿನಲ್ಲಿ ಸೋಲುತ್ತಿದೆ ಎಂದು ತೀರಾ ವಿಷಾದದಿಂದ ಹೇಳುತ್ತೇನೆ. ನೀವು ಚಿಕ್ಕಂದಿನಿಂದಲೂ ಪಶುವೈದ್ಯನಾಗಬೇಕು ಎಂದು ಬಯಸಿದಂತೆ ನಾನು ಚಿಕ್ಕಂದಿನಿಂದಲೂ ಶಿಕ್ಷಕನಾಗಬೇಕೆಂದು ಬಯಸಿದವನು. ಎಷ್ಟೋ ಮಕ್ಕಳಿಗೆ ಅನೌಪಚಾರಿಕವಾಗಿ ಪಾಠಮಾಡಿದ್ದೇನೆ ಮತ್ತು ಅದನ್ನು ಆನಂದಿಸಿದ್ದೇನೆ.
ದುಬಾರಿ ಹಣತೆತ್ತು ಶಾಲೆಗೆ ಕಳಿಸಿ ನಮ್ಮ ಮಕ್ಕಳನ್ನು ಇನ್ನಷ್ಟು ಕುಬ್ಜರನ್ನಾಗಿ ಮಾಡುತ್ತಿದ್ದೇವೆ ಎಂಬುದು ವಿಪರ್ಯಾಸ. ನನಗಂತೂ ಈ ಶಿಕ್ಷಣ ವ್ಯವಸ್ಥೆಯನ್ನು ಒಂದಿನಿತೂ ಒಪ್ಪಲಾಗುತ್ತಿಲ್ಲ. ನನ್ನ ಮಗನಿಗೆ ನಾನೇ ಓದಿಕೊಟ್ಟರೆ ಸಾಕಲ್ಲವೇ? ಎಂದು ಬಹುವರ್ಷಗಳಿಂದ ಅನ್ನಿಸಿದೆ. ನನ್ನ ಮಗ ಸದ್ಯ ಒಂದನೇ ತರಗತಿಗೆ ಹೋಗಬೇಕು. ನಾನೂ ಅವನ ಹೋಮ್ ಸ್ಕೂಲಿಂಗ್ ಬಗ್ಗೆ ಈಗ ಗಂಭೀರವಾಗಿ ಯೋಚಿಸುತ್ತಿದ್ದೇನೆ.
ಹಾಗೆಯೇ, ಸಂಸ್ಕೃತವನ್ನು ಕುರಿತ ನಿಮ್ಮ ಬರವಣಿಗೆಯನ್ನು ತುಂಬಾ ಆನಂದದಿಂದ ಓದಿದೆ. ಸಂಸ್ಕೃತದ ಕುರಿತು ಏನನ್ನೇ ಹೇಳಿದರೂ ನಾನು ತುಂಬಾ ಆಸಕ್ತಿಯಿಂದ ಕೇಳುತ್ತೇನೆ. ಪುಸ್ತಕದ ಪರಿವಿಡಿಯಲ್ಲಿ ಆ ಅಧ್ಯಾಯದ ಶೀರ್ಷಿಕೆಯನ್ನು ನೋಡಿ ಎಷ್ಟು ಬೇಗ ಅದನ್ನು ಓದುತ್ತೇನೋ ಎಂದು ಕಾತರಿಸುತಿದ್ದೆ. ಪುಸ್ತಕವನ್ನು ಮೊದಲಿನಿಂದ ಕ್ರಮವಾಗಿ ಓದಬೇಕು ಹಾಗೂ ಸಂಸ್ಕೃತವನ್ನು ಕುರಿತ ಅಧ್ಯಾಯವನ್ನು ಆದಷ್ಟು ಬೇಗ ಓದಬೇಕು ಎಂಬ ಕಾರಣಗಳಿಂದ ಇಡೀ ಪುಸ್ತಕವನ್ನು ಒಂದೇ ಹಂತದಲ್ಲಿ ಓದಿ ಮುಗಿಸಿದೆ! ಇತ್ತೀಚಿಗೆ ಯಾವ ಪುಸ್ತಕವನ್ನೂ ಹೀಗೆ ಒಂದೇ ಸಮನೆ ಓದಿ ಮುಗಿಸಿದ್ದಿಲ್ಲ.
ಸುಮಾರು ಹತ್ತು ವರ್ಷಗಳಿಂದ ಸಂಸ್ಕೃತವನ್ನು ಕಲಿಯುತ್ತಿದ್ದೇನೆ. ಕಲಿಯುತ್ತಾ ಈ ಭಾಷೆಯ ಸೌಂದರ್ಯಕ್ಕೆ ಮರುಳಾಗಿದ್ದೇನೆ. ಇದರ ಆಳ ಅಗಲಗಳನ್ನು ಊಹಿಸಿ (ಕಂಡಲ್ಲ !) ವಿಸ್ಮಿತನಾಗಿದ್ದೇನೆ. ಬಹುತೇಕ ಪ್ರತಿದಿನವೂ ಒಂದಷ್ಟು ವ್ಯಾಕರಣವನ್ನು ಅಭ್ಯಾಸ ಮಾಡುತ್ತಿದ್ದೇನೆ. ನೀವು ಪುಸ್ತಕದಲ್ಲಿ ಉದಾಹರಿಸಿದಂತೆ ಈ ಭಾಷೆಯಲ್ಲಿ ಪದಗಳು ಅವುಗಳ ಮೂಲ ಧಾತುಗಳಿಂದ ನಿರ್ಮಾಣವಾಗುವ ರೀತಿಯು ನಿಜಕ್ಕೂ ಅದ್ಭುತ ವಿಷಯ. ಸ್ವಸ್ಥ ನಿಮ್ಮ ಚಿಕ್ಕಪದ ಆರೋಗ್ಯವಂತನನ್ನು ಎಷ್ಟು ಮಹತ್ತರವಾಗಿ ವ್ಯಾಖ್ಯಾನಿಸುತ್ತದೆ! ನಯನ (ನಯತಿ ಇತಿ) ಎಂಬ ಪದ ಎಷ್ಟು ಚೆನ್ನಾಗಿ ಕಣ್ಣಿಗೆ ಒಪ್ಪುತ್ತದೆ! ಹೀಗೆ ಈ ಭಾಷೆಯಲ್ಲಿನ ಸಂರಚನೆಯನ್ನು ಆಸ್ವಾದಿಸುತ್ತಾ ಆನಂದಿಸುತ್ತೇನೆ. ಸಂಭಾಷಣೆಯಲ್ಲಿ ಆಸಕ್ತಿಯಿದ್ದರೂ ನನ್ನ ಸುತ್ತಲಿನ ವಾತಾವರಣ ಅದಕ್ಕೆ ಪೂರಕವಾಗಿ ಇಲ್ಲ ಎಂದು ಅದರ ಕಡೆ ಅಷ್ಟಾಗಿ ಗಮನವನ್ನು ಕೊಟ್ಟಿರಲಿಲ್ಲ. ನಿಮ್ಮ ಬರವಣಿಗೆಯನ್ನು ಓದಿದ ಮೇಲೆ ಸಂಭಾಷಣೆಯಲ್ಲಿ ಆಸಕ್ತಿ ಚಿಗುರಿದೆ. ಇನ್ನು ಮುಂದೆ ಹೆಚ್ಚು ಹೆಚ್ಚು ಸಂಸ್ಕೃತ ಸಂಭಾಷಣೆಯಲ್ಲಿ ತೊಡಗುವೆ.
ಕೊನೆಯದಾಗಿ ಅಗ್ರಿಟೂರಿಸಂ ಬಗ್ಗೆ ನನ್ನ ಆಪ್ತರೊಬ್ಬರು ನನ್ನೊಡನೆ ಈ ಮುಂಚೆ ಹಂಚಿಕೊಂಡಿದ್ದರು. ಅಧ್ಯಾಯದಲ್ಲಿನ ಎಲ್ಲಾ ವಿಚಾರಗಳು ನನಗೆ ಅತ್ಯಂತ ಮಾರ್ಗದರ್ಶಿಯಾಗಿವೆ. ಸದ್ಯ ನಮ್ಮ ಹೊಲದಲ್ಲಿ ಹೊಸದಾಗಿ ಮನೆಯನ್ನು ಕಟ್ಟಿಸುತ್ತಿದ್ದೇವೆ. ಮುಂದಿನ ವರ್ಷದಿಂದ ಇಲ್ಲಿಯೇ ವಾಸಮಾಡಲು ತೊಡಗಿದಮೇಲೆ ಇನ್ನಷ್ಟು ಹೆಚ್ಚು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ.
ನಾಲ್ಕು ಗಂಟೆಗೆ ಎದ್ದು ಇದನ್ನೆಲ್ಲಾ ಬರೆದೆ. ಈಗ ಸಮಯ ಐದೂವರೆ. ಆರಕ್ಕೆ ನಮ್ಮ ಆಸ್ಪತ್ರೆಯಲ್ಲಿರಬೇಕು. ಕಾಲುಬಾಯಿರೋಗದ ಲಸಿಕ ಕಾರ್ಯಕ್ರಮ ಸದ್ಯ ಚಾಲ್ತಿಯಲ್ಲಿದೆ. ಹಾಗಾಗಿ ಇಷ್ಟನ್ನು ಬರೆದು ನಿಲ್ಲಿಸುತ್ತಿದ್ದೇನೆ.
ಧನ್ಯವಾದಗಳು!
~ ಡಾ. ತಿಮ್ಮರಾಜು ಜಿ.
ಮುಖ್ಯ ಪಶುವೈದ್ಯಾಧಿಕಾರಿ
ತಾವರೆಕೆರೆ.